ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು, ಎಷ್ಟು ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ
ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತಾ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿಯನ್ನು ಹುಡುಕುತ್ತಾ, ಪುಟ ೧೦೯
ಯಾವುದೇ ಭಾಷೆ ಬೆಳೆಯುವುದೂ ಅದರಲ್ಲಿ ಉತ್ತಮ ಸಾಹಿತ್ಯ ನಿರ್ಮಿತಿ ಸಾಧ್ಯವಾಗುವುದು ಸಮ್ಮೇಳನಗಳಿಂದ ಅಲ್ಲ. ಜನ ಅದನ್ನು ಬಳಸುವುದರಿಂದ ಮಾತ್ರ. ಯಾವ ಭಾಷೆಯನ್ನು ನಾವು ಜೀವನದಲ್ಲಿ ಉಪಯೋಗಿಸಿದೆವು, ಅದರ ಏಳಿಗೆಗಾಗಿ ಯಾವ ರೀತಿ ಹೋರಾಡಿದೆವು ಎಂಬುದು ಬಹಳ ಮುಖ್ಯ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೬೮
ಸಾಕ್ಷರತೆ, ಅಕ್ಷರ ಕಲಿತ ಕನ್ನಡಿಗರಿಗೆ ಜಗತ್ತಿನ ಜ್ಞಾನ ಭಂಡಾರಕ್ಕೆ ತೆರೆದ ಬಾಗಿಲಾಗಬೇಕು. ಎಂದರೆ ಜಗತ್ತಿನ ಜ್ಞಾನ ದಿಗಂತಗಳ ಇತ್ತೀಚಿನ ವಿಸ್ತರಣೆ ಸಹ ಓದಲು ಕನ್ನಡದಲ್ಲಿ ದೊರೆಯುವಂತಾಗಬೇಕು. ಹೀಗಾಗದೆ ಹೋದರೆ ಅನಕ್ಷರತೆಗೂ ಸಾಕ್ಷರತೆಗೂ ವ್ಯತ್ಯಾಸವೇ ಇರುವುದಿಲ್ಲ. ಸಾಕ್ಷರತೆಯ ಉಪಯೋಗ ಮಾಡದ ಜನ ಸಮುದಾಯ ಬಹುಬೇಗ ಮತ್ತೇ
ಏಕಲಿಪಿ, ಏಕಭಾಷೆ ಮತ್ತು ಏಕಮತ ಇವು ಯಾವುವೂ ಭಾವೈಕ್ಯವನ್ನು ಸಾಧಿಸಲಾರದೆ ಸೋತಿರುವುದಕ್ಕೆ ಇತಿಹಾಸದ ಉದ್ದಕ್ಕೂ ಸಾಕ್ಷ್ಯಗಳು ಚೆಲ್ಲಿಬಿದ್ದಿವೆಯಲ್ಲಾ!?
– ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ
ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ,
ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ.
– ಕುವೆಂಪು, ಮನುಜ ಮತ ವಿಶ್ವ ಪಥ, ಪುಟ ೧